ಸೋಮಶೇಖರನಾಯಕ 2

	ಕೆಳದಿ ರಾಜವಂಶದ ಅರಸು. (ಸು. 1714-39) ಹಿರಿಯ ಬಸವಪ್ಪನಾಯಕನ ಮಗ. ಇವನ ಕಾಲದಲ್ಲಿ ಬಿದನೂರಿಗೂ ಮಲೆಯಾಳದಲ್ಲಿನ ಕೋಲತ್ತಿರಿವಂಶಸ್ಥರಿಗೂ ಬಹುಕಾಲ ಯುದ್ಧ ನಡೆಯಿತು. ಈ ವಂಶದ ಅರಸುಮನೆತನದಲ್ಲಿ ಒಳಜಗಳಗಳಿ ದ್ದವು. ಇವರಿಗೂ ಮತ್ತು ಮಲಬಾರಿನ ಇತರ ಚಿಕ್ಕಪುಟ್ಟ ಸಂಸ್ಥಾನಗಳಾದ ಕಣ್ಣಾನೂರು ಮತ್ತು ಕೊಟ್ಟಾಯಮ್‍ನ ರಾಜನಿಗೂ ಪದೇ ಪದೇ ಜಗಳಗಳಾಗುತ್ತಿದ್ದುವು. ಬಿದನೂರಿನವರು ಈ ಜಗಳಗಳನ್ನು ಉಪಯೋಗಿಸಿಕೊಂಡು ತಮ್ಮ ರಾಜ್ಯವಿಸ್ತರಣೆ ಮಾಡಬಯಸಿದರು. ಆದರೆ ಡಚ್ ಮತ್ತು ಇಂಗ್ಲಿಷ್‍ನವರಿಗೆ ನಷ್ಟವಾಗುತ್ತಿದ್ದುದರಿಂದ ಈ ಯುದ್ಧವನ್ನು ಅವರು ನಿಲ್ಲಿಸಬಯಸುತ್ತಿದ್ದರು. ಈ ಯುದ್ಧದಿಂದ ಬಿದನೂರಿನವರಿಗೆ ತುಂಬಾ ನಷ್ಟವಾಯಿತು. ಜಗಳವಾಡುತ್ತಿರುವ ಪಂಗಡಗಳಿಂದ ತಮಗೆ ಅನುಕೂಲವಾಗುವಂತೆ ಡಚ್ ಮತ್ತು ಇಂಗ್ಲಿಷರು ವ್ಯಾಪಾರೀ ಕರಾರುಗಳನ್ನು ಮಾಡಿಕೊಂಡರು.

	ಸವಣೂರು ನವಾಬ ಅಬ್ದುಲ್ ಮಹಮದ್ ಖಾನ್, ಪತ್ತೆಲಸ್ಕರಿ ಎಂಬ ಆನೆ, ಕುದುರೆ ಮತ್ತು ಉಚಿತ ಉಡುಗೊರೆಗಳನ್ನು ಕಳಿಸಿ ಸೋಮಶೇಖರನೊಡನೆ ಸ್ನೇಹವನ್ನು ಮಾಡಿಕೊಂಡ. ಇದೇ ರೀತಿ ಸೋದೆಯ ಸದಾಶಿವನಾಯಕ ಈತನ ಸ್ನೇಹವನ್ನು ದೊರಕಿಸಿಕೊಂಡ. ಮೊದಲನೆಯ ಬಾಜೀರಾಯ ಇವರೆಲ್ಲರನ್ನೂ ಸೋಲಿಸಿ ಚೌತನ್ನು ವಸೂಲಿ ಮಾಡಿದ (1726-27).

	ಚಿತ್ರದುರ್ಗದ ಭರಮಪ್ಪನಾಯಕ ಗುತ್ತಲದ ಹನುಮಂತ ದೇಸಾಯಿ ಯೊಡನೆ ಸಖ್ಯ ಬೆಳೆಸಿ ಬಿದನೂರಿನ ಕಡೆಯಾಗಿದ್ದ ತರೀಕೆರೆ ಪಾಳ್ಯಕ್ಕೆ ಮುತ್ತಿಗೆ ಹಾಕಿದಾಗ ಸೋಮಶೇಖರ ಭರಮಪ್ಪನನ್ನು ಹಿಮ್ಮೆಟ್ಟಿಸಿದ.

	ಎಲ್ಲ ಕೆಳದಿ ಅರಸರಂತೆ ಈತನೂ ಶೃಂಗೇರಿ ಮಠದ ವ್ಯವಹಾರದಲ್ಲಿ ಆಸ್ಥೆತೋರಿಸಿದ. ಈ ವ್ಯವಹಾರಗಳಲ್ಲಿ ಕಂಡುಬಂದ ಲೋಪದೋಷಗ ಳನ್ನು ಗುರುತಿಸಿ, ಅವುಗಳಿಗೆ ಕಾರಣರಾದವರನ್ನು ದಂಡಿಸಬೇಕೆಂದು ಸಚ್ಚಿದಾನಂದ ಭಾರತಿಸ್ವಾಮಿಗಳನ್ನು ಕೇಳಿಕೊಂಡ. ಈತನ ಬಿನ್ನಹದ ಮೇರೆಗೆ ಸ್ವಾಮಿಗಳು ಬಿದನೂರಿಗೆ ದಯಮಾಡಿಸಿ ಭವ್ಯವಾದ ಸ್ವಾಗತವನ್ನು ಪಡೆದರು. ಕೂಡಲಿ ಮಾಧ್ವಮಠದ ರಘುರಾಜತೀರ್ಥಸ್ವಾಮಿ ಗಳಿಗೆ ಗಾಜನೂರು ಸೀಮೆಯಲ್ಲಿಯ ಜಿನ್ನಗೊಂಡನ ಕೊಪ್ಪವನ್ನು ದಾನಮಾಡಿದ. ಕೆಂಚವ್ವ ಮತ್ತು ಮಲ್ಲಶೆಟ್ಟಿಯರು ಕಟ್ಟಿದ ಎರಡು ವಿರಕ್ತಮಠಗಳನ್ನು ಈತ ಪೋಷಿಸಿದ. ಮತ್ತೂರುಸೀಮೆಯ ಮಲೆಯಾಳ ಮಠದ ಗ್ರಾಮದಲ್ಲಿ ವೆಂಕಟಯ್ಯ ಎಂಬವನು ಸ್ಥಾಪಿಸಿದ ಅವಿಮುಕ್ತೇಶ್ವರ ಮತ್ತು ಬಿಂದುಮಾಧವ ದೇವರ ಆರಾಧನೆಗೂ ತಾನು ಈ ದೇವಸ್ಥಾನದ ಹತ್ತಿರ ಸ್ಥಾಪಿಸಿದ ಚಂದ್ರಶೇಖರಪುರ ಅಗ್ರಹಾರಕ್ಕೂ ಭೂದಾನಮಾಡಿದ. ಬಿದನೂರಿನಲ್ಲಿ ತಟಾಕ-ತೋಟಗಳಿಂದ ಶೋಭಿಸುತ್ತಿದ್ದ ಅರಮನೆಯನ್ನು ಕಟ್ಟಿದ. ನೀಲಕಂಠೇಶ್ವರ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿ ಸುವರ್ಣ ಶಿಖರದಿಂದ ಅಲಂಕರಿಸಿದ. ಪ್ರಜೆಗಳ ಹಿತಕ್ಕೆ ಬಹುವಾಗಿ ಶ್ರಮಿಸಿದ. ವೃದ್ಧಾಪ್ಯದಲ್ಲಿ ತೀರ್ಥಯಾತ್ರೆ ಹೊರಟು ಶೃಂಗೇರಿ, ಶಂಕರನಾರಾಯಣ, ಕೊಲ್ಲೂರು, ಗೋಕರ್ಣಗಳನ್ನು ಸಂದರ್ಶಿಸಿದ. 25 ವರ್ಷ ಆಳಿದ ಅನಂತರ ಶಿವಮೊಗ್ಗೆಯಲ್ಲಿ ನಿಧನನಾದ. ಬಿದನೂರಿ ನಲ್ಲಿ ಇವನ ಸಮಾಧಿ ಮಾಡಲಾಯಿತು.
												(ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ